ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗಕ್ಕೆ ತನ್ನದೇ ಆದ ಇತಿಹಾಸವಿರುತ್ತದೆ. ತುಂಗಾ ಹಾಗೂ ಭದ್ರಾ ನದಿಗಳು ಸಂಚರಿಸುವುದರಿಂದ ಇದೊಂದು ಪುಣ್ಯಭೂಮಿಯೇ ಸರಿ. ಅನೇಕ ಕಲೆ ಸಾಹಿತ್ಯ ವೇದ ಸಂಸ್ಕೃತಕ್ಕೆ ಹೆಸರಾದ ಊರು ಶಿವಮೊಗ್ಗ. ಇತಿಹಾಸದ ಪ್ರಕಾರ ಜಾನಪದ ಕಥೆಗಳು ಹೇಳುವಂತೆ ಪ್ರಭು ಶ್ರೀರಾಮಚಂದ್ರನು ಓಡಾಡಿದ ಜಾಗ ಈ ಸಿರಿಜಿಲ್ಲೆ. ಅನೇಕ ತಪಸ್ವಿಗಳು ತಪವನ್ನಾಚರಿಸಿ ಲೋಕೋದ್ಧಾರವನ್ನು ಮಾಡುತ್ತಿರುವ ಈ ಭೂಮಿ ಪುಣ್ಯಭೂಮಿ ಅನ್ನುವುದರಲ್ಲಿ ಸಂದೇಹವೇ ಇಲ್ಲಾ. ಈ ಮೊದಲು ಆಶ್ರಮ ಶಿವಮೊಗ್ಗದ ರಾಮೇನಕೊಪ್ಪದಲ್ಲಿ ೨೦೧೮ ರಲ್ಲಿ ಆರಂಭವಾಗಿ ಕ್ಷೇತ್ರದಲ್ಲಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಭಾರತಿ ತೀರ್ಥ ಗೋಶಾಲೆ ಇಂದಿಗೂ ನಡೆಯುತ್ತಿದೆ. ನೂರಾರು ಧಾರ್ಮಿಕ ಕಾರ್ಯಕ್ರಮಗಳಿಗೂ ಸಾಕ್ಷಿಯಾಗಿದ್ದು ೨೦೧೮ ರಲ್ಲಿ ಶ್ರೀ ಶೃಂಗೇರಿ ಸನ್ನಿಧಾನಂಗಳವರಾದ ಶ್ರೀ ಶ್ರೀ ವಿಧುಶೇಖರಭಾರತಿ ಮಹಾಸ್ವಾಮಿಗಳು ಚಿತ್ತೈಸಿ ಶಂಕುಸ್ಥಾಪನೆಯನ್ನು ಮಾಡಿ ಸತ್ಕಾರ್ಯ ನಿರತರಾಗುವಂತೆ ಅಪ್ಪಣೆ ಮಾಡಿ ಹರಸಿದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಅಲ್ಲಿಯೇ ದೇವಾಲಯದ ಕಾರ್ಯ ನಿರ್ಮಾಣವಾಗಬೇಕಿತ್ತು. ೨೦೧೯ ರ ನಂತರ, ಕರೋನಾ ಕಾರಣದಿಂದಾಗಿ ದೇವಾಲಯ ನಿರ್ಮಿಸಲು ಸಾಧ್ಯವಾಗಲಿಲ್ಲ. ವಿಶಾಲವಾದ ಜಾಗದ ಅಗತ್ಯ ಇದ್ದುದರಿಂದ ಬೇರೆ ಜಾಗದ ಹುಡುಕಾಟದಲ್ಲಿದ್ದಾಗ ಶಿವಮೊಗ್ಗ ತ್ಯಾವರೆಕೊಪ್ಪ, ಮುದ್ದಿನಕೊಪ್ಪ (ಸದರಿ ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲ್ಲೂಕಿನ) ಮುದುವಾಲ ಸಮೀಪದ ಜಾಗದ ವಿಚಾರವನ್ನು ಜಗದ್ಗುರುಗಳಿಗೆ ತಿಳಿಸಿದಾಗ ಜಗದ್ಗುರುಗಳು ಸಮ್ಮತಿಸಿ ಪೂರ್ಣಾನುಗ್ರಹ ಮಾಡಿ ಸುವರ್ಣ ಮಂತ್ರಾಕ್ಷತೆ ಇತ್ತು ಹರಸಿರುತ್ತಾರೆ.